ದರ್ಪಣ ಲೇಖನ-
	ಒತ್ತುಕಾಗದದಲ್ಲಿ ಬೀಳುವ ಪ್ರತಿಯಂತೆ ಅಂದರೆ ಮೊಗಚಿದಂತಿದ್ದು, ಕನ್ನಡಿ ಎದುರು ಹಿಡಿದಾಗ ಸ್ಪಷ್ಟವಾಗಿ ಕಾಣಿಸುವ ರೀತಿಯ ಬರೆಹ (ಮಿರರ್ ರೈಟಿಂಗ್). ಸಾಮಾನ್ಯವಾಗಿ ಇದನ್ನು ಎಡಚು ಅಭ್ಯಾಸಕ್ಕೆ ಸಂಬಂಧಿಸಿದ್ದೆಂದು ಪರಿಗಣಿಸಲಾಗಿದೆ. ಈ ಅಭ್ಯಾಸ ಯಾವ ತರಗತಿಯ ಜನರಲ್ಲಾದರೂ (ಬುದ್ಧಿ ಊನವಾಗಿರುವವರಿಂದ ಪ್ರತಿಭಾಶಾಲಿಯವರೆಗೂ ಮಕ್ಕಳಿಂದ ದೊಡ್ಡವರವರೆಗೂ) ಇದ್ದು ಅದು ಬುದ್ಧಿಪೂರ್ವಕವಾಗಿರಬಹುದು ಅಥವಾ (ಬಲಪಾಶ್ರ್ವವಾಯು ಹೊಡೆದಿರುವಲ್ಲಿ) ಸ್ವಪ್ರಜ್ಞೆ ಇಲ್ಲದೆಯೇ ಇರಬಹುದು. ಸ್ವಪ್ರಜ್ಞೆಯಿಲ್ಲದೆ ಇದು ಕಾಣಿಸುವ ಉದಾಹರಣೆಗಳಲ್ಲಿ, ಬಲಪಾಶ್ರ್ವವಾಯು ಹಿಡಿದಾತ ತನ್ನ ಎಡಗೈಯಲ್ಲಿ ದರ್ಪಣಲೇಖನದಂತೆ ಬರೆಯುವಾಗ ಅವನಿಗೆ ತನ್ನ ವಾಕ್‍ಶಕ್ತಿಯ ದೃಗಂಶ ಅವ್ಯವಸ್ಥಿತವಾಗಿರುವುದಲ್ಲದೆ, ರೋಗಿಯ ಕಲೆಹಾಕಿದ ನೆನಪುಗಳು ಮಿದುಳಿನ ಬಲ ಅರ್ಧದಲ್ಲಿ ಕೇಂದ್ರೀಕೃತವಾಗಿದ್ದು ತಾವೇ ಸ್ವತಃ ಕಾರ್ಯಶೀಲವಾಗುವುದರಿಂದ ಹೀಗಾಗುತ್ತದೆಂದು ವಿವರಣೆ ನೀಡುತ್ತಾರೆ.
(ಕೆ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ